ಉಜಿರೆ, ನ. 23: ಇಲ್ಲಿನ ಶ್ರೀ ಸಿದ್ಧವನ ಗುರುಕುಲದಲ್ಲಿ ನ. 22 ರಂದು ಉದ್ಘಾಟನೆಗೊಂಡ ‘ಕನ್ನಡ ಸಾಂಸ್ಕೃತಿಕ ಸಂವರ್ಧನೆ ಮತ್ತು ಭಾಷಾಂತರಕಾರರು’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಮೊದಲ ದಿನದ ಪ್ರಥಮ ಗೋಷ್ಠಿಯಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರದ ನಿವೃತ್ತ ಮುಖ್ಯಸ್ಥೆ ಡಾ. ಎಂ. ಉಷಾ ಹಾಗೂ ಕಲಾ ನಿಕಾಯದ ಡೀನ್ ಡಾ. ಕೆ. ರವೀಂದ್ರನಾಥ ವಿಚಾರ ಮಂಡಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗ ಮತ್ತು ಭಾಷಾಂತರ ಕೇಂದ್ರ ಹಾಗೂ ಶ್ರೀ ಕೆ.ಎಸ್. ವೀರಭದ್ರಪ್ಪ ದತ್ತಿನಿಧಿ ಮತ್ತು ಉಜಿರೆ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಡಾ. ಹಾ.ಮಾ.ನಾ. ಸಂಶೋಧನಾ ಕೇಂದ್ರ ಮತ್ತು ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕರ್ನಾಟಕ ಭಾಷಾಂತರಕಾರರ ಒಕ್ಕೂಟದ ಸಹಯೋಗದಲ್ಲಿ ಭಾಷಾಂತರಕಾರರ ಮೂರನೆಯ ಸಮಾವೇಶದ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪಾಶ್ಚಾತ್ಯ ವಿದ್ವಾಂಸ ಕರ್ನಲ್ ಮೆಕೆಂಜೆ ಕುರಿತು ವಿಷಯ ಮಂಡಿಸಿದ ಡಾ. ಎಂ. ಉಷಾ ಅವರು, ಕನ್ನಡ ಭಾಷೆ ಹಾಗೂ ಭಾಷಾಂತರದಲ್ಲಿ ಮೆಕಂಜೆ ಅವರ ಕೊಡುಗೆ ಕುರಿತು ತಿಳಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪಾಶ್ಚಿಮಾತ್ಯ ವಿದ್ವಾಂಸರಲ್ಲಿ ಮೆಕಂಜೆ ಗಣಿತ ತಜ್ಞನೂ ಆಗಿದ್ದು, ಭಾರತಕ್ಕೆ ಬಂದ ನಂತರ ಬ್ರಿಟಿಷ್ ಸೈನ್ಯದಲ್ಲಿ ಅಧಿಕಾರಿಯಾಗಿ ಸೇವೆಗೆ ಸೇರಿ ತನ್ನ ಕಾರ್ಯದ ಜೊತೆಗೆ ತಾನು ಸೇವೆ ಸಲ್ಲಿಸುತ್ತಿರುವ ಪ್ರದೇಶದಲ್ಲಿನ ಸಮಾಜದ ಹಲವು ಆಯಾಮಗಳನ್ನು ದಾಖಲಿಸಿದ. ಆತ ತನ್ನ ವೈಯಕ್ತಿಕ ಉಪಯೋಗಕ್ಕೆ ಮಾಡಿದ ಭಾಷಾಂತರ ಪ್ರಸ್ತುತ ಕನ್ನಡಕ್ಕೆ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.
ಡಾ. ಕೆ. ರವೀಂದ್ರನಾಥ ಅವರು, ವಚನ ಸಾಹಿತ್ಯದ ಪಿತಾಮಹ ಫ.ಗು. ಹಳಕಟ್ಟಿ ಅವರ ಬಗ್ಗೆ ವಿಷಯ ಮಂಡಿಸಿದರು. ವಚನ ಸಂಸ್ಕೃತಿಯ ಭಾಷಾಂತರದಲ್ಲಿ ಅವರ ಪಾತ್ರ ಹಾಗೂ ಅವರು ಸಂಗ್ರಹಿಸಿದ ವಚನ ಭಾಷಾಂತರದ ಕುರಿತು ಬೆಳಕು ಚೆಲ್ಲಿದರು.
ಶಿವಮೊಗ್ಗದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್. ಎಸ್. ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಕವಿತಾ ಉಮೇಶ್ ಗೋಷ್ಠಿ ನಿರ್ವಹಿಸಿದರು.